ಸೋಮವಾರ, ಮಾರ್ಚ್ 29, 2010

"ವಿದಿಯಾಟ "

ಬಸ್ಸು ಕಾಡಿನ ನಿಶ್ಯಬ್ದತೆಯನ್ನು ಬೇದಿಸಿ ಜೋರು ಶಬ್ದ ಮಾಡುತ್ತ, ಬೆಟ್ಟದ ಏರು ರಸ್ತೆಯಲ್ಲಿ ತೆವಳುತ್ತ , ಇಳಿಜಾರಿನಲ್ಲಿ ಸರಾಗವಾಗಿ ಇಳಿಯುತ್ತ ಸಾಗಿತ್ತು. ಹಸಿರಿನಿಂದ ಕಂಗೊಳಿಸುತ್ತಿದ್ದಆ ಪೂರ್ವಘಟ್ಟಗಳಲ್ಲಿ ಆ ರಸ್ತೆಯು ಮಾನವ ನಾಗರೀಕತೆಯ ಬರೆ ಎಳೆದಂತೆ ಬಾಸವಗುತಿತ್ತು.


" ಈ ಹುಡುಗ ಯಾರದ್ದು ?" ಕಂಡಕ್ಟರ್ ಆ ಹನ್ನೆರಡು ವರ್ಷದ ಹುಡುಗನನ್ನು ತೋರಿಸಿ ಕೇಳಿದ. ಆ ಹುಡುಗ ಮುಗ್ದತೆಯಿಂದ ತನ್ನ ಅವ್ವನ ಕಡೆ ಬೆರಳು ತೋರಿಸಿದ. ಕಂಡಕ್ಟರ್ ಆಕೆಯ ಬಳಿ ಹೋಗಿ ಹಣ ಕೇಳಿದನು. ಆಕೆ ತನ್ನ ಹಸಿರು ಬಣ್ಣದ ದುಡ್ಡಿನ ಚೀಲವನ್ನು ತೆಗೆದು ಅದರಿಂದ ಐದು ರೂಗಳ ಚಿಲ್ಲರೆ ಕೊಟ್ಟಳು. ಕಂಡಕ್ಟರ್ ಆ ಹುಡುಗನಿಗೆ ಪೂರ್ತ ಚಾರ್ಜು ಕೇಳಿದ. ಆಕೆ ತನ್ನ ಮಗನಿಗೆ ಬೇರೆ ಯಾವ ಬಸ್ಸಿನಲ್ಲೂ ಪೂರ್ತ ಚಾರ್ಜು ತೆಗೆದುಕೊಳ್ಳುವುದಿಲ್ಲವೆಂದು ಸಮಜಾಯಿಸಿ ತನ್ನ ದುಡ್ಡಿನ ಚೀಲವನ್ನು ಸೊಂಟಕ್ಕೆ ಸಿಕ್ಕಿಸಿದಳು. ಕಂಡಕ್ಟರ್ನಿಗೆ ಆಕೆ ಹಣ ನೀಡುವುದಿಲ್ಲವೆಂದು ಖಚಿತವಾಯಿತು. ಅವಳ ಬುಟ್ಟಿಯ ಮೇಲೆ ಇಟ್ಟಿದ್ದ ಕೆಂಪು ಬಣ್ಣದ ಆಟದ ಕಾರನ್ನು ನೋಡಿ ಎತ್ತಿಕೊಂಡ. "ನೀನು ದುಡ್ಡು ಕೊಟ್ಟು ಈ ಕಾರನ್ನು ಪಡೆದುಕೋ" ಎಂದ ಆ ಕಂಡಕ್ಟರ್, ಅದನ್ನು ತನ್ನ ಕ್ಲೀನರ ನಿಗೆ ಕೊಟ್ಟು " ತಗೋ ನಿನ್ನ ಮಗನಿಗೆ ಆಡಿಸಲು ಆಗುತ್ತದೆ " ಎಂದು ಮುಂದೆ ಹೊರಟ. ಆ ಆಟಿಕೆಯ ಕಾರನ್ನು ಇಟ್ಟುಕೊಂಡು ಅವನೇನು ಮಾಡಿಯಾನು ಎಂದು ಆಕೆ ಮೌನವಾದಳು. ಇದನ್ನೆಲ್ಲವನ್ನು ನೋಡುತ್ತಿದ್ದ ಆ ಹುಡುಗನಿಗೆ ತನ್ನ ಇಷ್ಟದ ಕಾರು ಬೇರೊಬ್ಬರ ಕೈಸೇರಿದುದು ಸಹಿಸಲಾಗಲಿಲ್ಲ.


ಅಪ್ಪ ಕೊಟ್ಟ ಒಂದೊಂದೇ ರೂಪಾಯಿಗಳನ್ನು ಸೇರಿಸಿ ಮೂವತೈದು ರೂಪಾಯಿ ಮಾಡಿದ್ದ. ಜಾತ್ರೆಯಲ್ಲಿ ಆ ಕೆಂಪು ಬಣ್ಣದ ಹೊಳೆಯುವ ಸೀಟಿನ ಕಾರು ಅವನನ್ನು ಆಕರ್ಷಿಸಿತ್ತು. ತನ್ನ ಅವ್ವನ ಕಣ್ ತಪ್ಪಿಸಿ ಅದನ್ನು ಇಪ್ಪತೈದು ರೂಪಾಯಿಗೆ ತನ್ನದಾಗಿಸಿಕೊಂಡಿದ್ದ. ಅದಕ್ಕಾಗಿ ತನ್ನ ಅವ್ವನಿಂದ ಬೈಗುಳ ಕೂಡ ತಿಂದಿದ್ದ. ಉಳಿದ ಹತ್ತು ರೂಪಾಯಿಯನ್ನು ಬಣ್ಣದ ಪೆನ್ಸಿಲ್ ಕೊಳ್ಳಲು ತನ್ನ ಹರುಕು ಚೆಡ್ಡಿಯ ಭಧ್ರ ಜೇಬಿನಲ್ಲಿರಿಸಿದ್ದ. ಮಗನ ಕೈಲಿದ್ದರೆ ಆ ಕಾರು ಹಾಳಗುತ್ತದೆಂದು ಅದನ್ನು ಅವನಿಂದ ಕಿತ್ತು ತನ್ನ ಬುಟ್ಟಿಯಲ್ಲಿರಿಸಿದ್ದಳು.


ಈಗ ತನ್ನ ಅವ್ವನ ಮೌನ ಅವನಿಗೆ ಸಹಿಸಲಾಗದ ಸಿಟ್ಟು ತರಿಸಿತ್ತು. ಹೀಗೆ ಮೌನವಾಗಿದ್ದಾರೆ ತನ್ನ ಕಾರು ತನಗೆ ದಕ್ಕುವುದಿಲ್ಲವೆಂದು ತನ್ನ ಅವ್ವನನ್ನು ಪೀಡಿಸತೊಡಗಿದ. ಅವನ ಕಾಟ ತಡೆಯಲಾರದೆ ಆಕೆ ಒಂದು ಏಟು ಕೊಟ್ಟಳು. ಆ ಹುಡುಗ ಅಳಲಿಲ್ಲ್ಲ. ಬಸ್ಸಿನ ಒಂದು ಮೂಲೆಯಲ್ಲಿ ಕುಳಿತ. ನಿಲ್ದಾಣ ಹತ್ತಿರವಾಗುತಿತ್ತು. ಅವನ ಮನಸು ಚಡಪಡಿಸತೊಡಗಿತ್ತು . ಆ ಕೆಂಪು ಕಾರು ಬಿಟ್ಟು ಅವನಿಗೇನೂ ತೋರಲಿಲ್ಲ. ನೇರವಾಗಿ ಆ ಕಂಡಕ್ಟರ್ ಬಳಿಗೆ ಹೋದ. ತನ್ನ ಹರುಕು ಚಡ್ಡಿಯ ಜೇಬಿನಿಂದ ಆ ಹತ್ತು ರೂಗಳನ್ನು ತೆಗೆದ. ಅದನ್ನು ಕಂಡಕ್ಟರ್ ನ ಕೈಗಿಡುವಷ್ಟರಲ್ಲೇ ಅವನನ್ನೇ ಗಮನಿಸುತ್ತಿದ್ದ ಅವನ ಅವ್ವ ಅವನ ಕೈಯಿಂದ ಆ ದುಡ್ಡನ್ನು ಕಿತ್ತುಕೊಂಡಳು. ಮನೆಯನ್ನು ಹಾಲು ಮಾಡಲು ಹುಟ್ಟಿದ್ದಾನೆಂದು ಬೈದು ಆ ದುಡ್ಡನ್ನು ತನ್ನ ಚೀಲಕ್ಕೆ ಸೇರಿಸಿದಳು. ಆ ಹುಡುಗನ ಕಣ್ಣಲ್ಲಿ ನೀರಾಡಿತು. ಅದನ್ನು ಕಂಡರೂ ಆ ಕಂಡಕ್ಟರ್ ನ ಮನ ಕರಗಲಿಲ್ಲ. ಬಸ್ ಸ್ವಲ್ಪ ದೂರ ಸಾಗುವಷ್ಟರಲ್ಲಿ ಆಕೆ ಕಂಡಕ್ಟರ್ನನ್ನು ಬೈಯಲು ಪ್ರಾರಂಬಿಸಿದಳು. ಆದರೆ ಅವಳ ಬೈಗಳಿಗೆ ಅವನ ಕಿವಿಗಳು ಮುಚಿದ್ದವು. ಬೇರೆ ದಾರಿ ಕಾಣದೆ ಆಕೆ ತನ್ನ ಚೀಲದಿಂದ ಆ ಹತ್ತು ರೂ ತೆಗೆದು ಕಂಡಕ್ಟರ್ ನ ಕೈಗೆ ಕುಕ್ಕಿದಳು. ಅವನು ತನ್ನ ಕ್ಲೀನರ್ ನಿಂದ ಆ ಕಾರನ್ನು ಆಕೆಗೆ ಹಿಂತಿರುಗಿಸಿದನು. ಹುಡುಗ ಕಾರನ್ನು ತನ್ನ ಅವ್ವನ ಕೈನಲ್ಲಿ ಕಂಡಿದ್ದೇ ಅವಳ ಬಳಿಗೆ ಓಡಿದನು. "ಎಲ್ಲಾ ನಿನ್ನಿಂದಲೇ ಆಗಿದ್ದು ಎಂದು ಮಗನ ತಲೆಗೆ ಮೊಟಕಿದಳು. ತನ್ನ ಕಾರು ಸಿಕ್ಕ ಸಂತೋಷದಲ್ಲಿ ಆ ನೋವು ಅವನಿಗೆ ತೋರಲಿಲ್ಲ. ಆಕೆ ಮತ್ತೆ ಆ ಕಾರನ್ನು ಕಿತ್ತು ತನ್ನ ಬುಟ್ಟಿಯಲ್ಲಿರಿಸಿದಳು. ಹುಡುಗ ಸ್ವಲ್ಪ ಗೆಲುವಾಗಿ ಕಂಡ. ಬಸ್ ನಿಂತಿತು. ಬಸ್ ತುಂಬಾ ಜನ ಹತ್ತಿದರು. ಹುಡುಗ ಡ್ರೈವರ್ ಸೀಟಿನ ಮೂಲೆ ಸೇರಿಕೊಂಡ.


ಹತ್ತು ನಿಮಿಷದ ನಂತರ ಬಸ್ ನಿಲ್ದಾಣದಲ್ಲಿ ನಿಂತಿತು. ಜನರು ಪ್ರಾಣಿಗಳಂತೆ ದಬದಬನೆ ಇಳಿಯತೊಡಗಿದರು. ಆಕೆಯೂ ಜನರ ಮದ್ಯೆ ತೂರಿಕೊಂಡು ಬಸ್ -ನಿಂದ ಇಳಿಯುವಾಗ ಯಾರೋ ಅವಳ ಕಾಲು ತುಳಿದಿದ್ದರು. ಬಸ್ ನಿಂದ ಇಳಿಯುತ್ತಲೇ ತನ್ನ ಬುತ್ತಿಯನ್ನು ಕೆಳಗೆ ಇತ್ತು ತನ್ನ ಕಾಲು ತುಳಿದವನ್ನನ್ನು ತರಾಟೆಗೆ ತೆಗೆದುಕೊಂಡಿದ್ದಳು. ಆ ಹುಡುಗ ಹೇಗೋ ಕಷ್ಟದಿಂದ ಇಳಿದು ತನ್ನ ಅವ್ವನ ಬಳಿಗೆ ಹೋದ. ಅವಳು ಕಾಲು ತುಳಿದವನನ್ನು ಬೈಯುತ್ತಿದ್ದಳು. ಆ ಹುಡುಗನ ದೃಷ್ಟಿ ಬುಟ್ಟಿಯ ಕಡೆಗೆ ಹೋಯಿತು. ತನ್ನ ಇಷ್ಟದ ಕಾರು ಎರಡು ಭಾಗವಾಗಿ ಬುಟ್ಟಿಯಲ್ಲಿ ಬಿದ್ದಿತ್ತು.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ