ಸೋಮವಾರ, ಮಾರ್ಚ್ 29, 2010

"ಹಾಗೆ ಸುಮ್ಮನೇ........"

ಬಸ್ ಆಗಲೇ ಮದ್ದೂರಿಗೆ ಸಮೀಪಿಸಿತ್ತು. ಕಪ್ಪನೆ ಮೋಡಗಳು ಒಂದೆಡೆ ಸೇರಿ ಈಗಲೋ ಆಗಲೋ ಎಂಬಂತೆ ಮಳೆ ಸುರಿಯಲು ಕಾದಿದ್ದವು. ಕಂಡಕ್ಟರ್ "ಮದ್ದೂರ್ ಯಾರ್ರೀ " ಎಂದು ಕೂಗಿದ. ಅದೇ ಸಮಯದಲ್ಲಿ ಕಪ್ಪನೆ ಕಟ್ಟಿದ್ದ ಮೋಡಗಳಿಂದ ದೋ ಎಂದು ಮಳೆ ಸುರಿಯತೊಡಗಿತು. ಬಸ್ ಕಿಟಕಿಯನ್ನು ಮುಚ್ಚಿ , ರೇಡಿಯೋ ಕೇಳಲು ಕಿವಿಗೆ ಇಯರ್ ಫೋನ್ ಹಾಕಿ, ಕಿಟಕಿಯಾಚೆ ಮಳೆ ನೋಡುತ್ತಾ ಕುಳಿತೆ. ಆಕಾಶವೇ ತೂತಾದಂತೆ ಮಳೆ ಸುರಿಯುತ್ತಿತ್ತು.


ರೇಡಿಯೋನಲ್ಲಿ "ನೀವು ಕೇಳ್ತಾ ಇದ್ದೀರಾ ರೇಡಿಯೋ ಮಿರ್ಚಿ ೯೮.೩ ಎಫ್ ಎಂ. ಸಕತ್ ಹಾಟ್ ಮಗ." ಎಂದು ಹೇಳುತ್ತಿರುವಂತೆಯೇ ಬಸ್ ನಿಲ್ದಾಣದಲ್ಲಿ ನಿಂತಿತು. ಆ ಮಳೆಯಲ್ಲೂ ಕೂಡ ಹೆಚ್ಚು ಜನ ಬಸ್ ಹತ್ತಿದರು. ಕೆಲವರಿಗೆ ನನಗಿಂತಲೂ ಹಿಂದಿನ ಸೀಟಿನಲ್ಲಿ ಕೂರಲು ಜಾಗ ಸಿಕ್ಕಿತು. ನಿಂತಿದ್ದ ಜನರಲ್ಲಿ ಕೆಲವರು ನಿಂತು ತೂಕಡಿಸಲು ಪ್ರಾರಂಬಿಸಿದ್ದರು. ಇನ್ನು ಕೆಲವು ಹೆಂಗಸರು ತಮ್ಮ ಮಾತು ಕತೆಯಲ್ಲಿ ತೊಡಗಿರುವಂತೆ ತೋರುತ್ತಿತ್ತು. "ಈಗ ಕೇಳಿ ಮೂರು ಹಾಡುಗಳು ಬ್ಯಾಕ್ ಟು ಬ್ಯಾಕ್ " ಎಂದು ರೇಡಿಯೋನಲ್ಲಿ ಪ್ರಾರಂಭವಾಗುತ್ತಿದ್ದಂತೆ ನೋಟ ಹಾಗೆಯೇ ಬಸ್ ನ ಬಾಗಿಲ ಕಡೆ ಹೋಯಿತು. ಬಾಗಿಲ ಬಳಿ ಒಬ್ಬಳು ಹುಡುಗಿ ನಿಂತಿದ್ದಳು. ನನ್ನೆಡೆಗೆ ತಿರುಗಿದಳು. ಅವಳ ನೋಟ ನನ್ನನ್ನೇ ಹುಡುಕುವಂತಿತ್ತು. ನಾನು ಕಣ್ ತಪ್ಪಿಸಿ ಮತ್ತೆ ಅವಳನ್ನೇ ನೋಡಿದೆ. ಆಗಲೂ ಅವಳು ನನ್ನೆಡೆಗೆ ನೋಟ ನೆಟ್ಟಿದ್ದಳು. ಕಿವಿಯಲ್ಲಿ ಬೇರೆ " ಸಾಂಗ್ ನಂಬರ್ ಟು" ಎಂದು "ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು .......ಮಾಯದ ಲೋಕದಿಂದ ನನಗಾಗೆ ಬಂದವಳೆಂದೂ..." ಹಾಡು ಗುನುಗುತ್ತಿತ್ತು. ಅಷ್ಟರಲ್ಲಿ ನನ್ನ ಪಕ್ಕದವನು ಮತ್ತು ಹಿಂದಿನವರು ಇಳಿಯಲು ಮೇಲೆದ್ದರು. ಆಕೆ ನನ್ನೆಡೆಗೆ ನೋಡಿ , ಬಾಗಿಲಿನಿಂದ ಬಂದು ನನ್ನ ಹಿಂದಿನ ಸೀಟಿನಲ್ಲಿ ಕುಳಿತಳು. ನಾನು ಇಯರ್ ಫೋನ್ ಸಡಿಲಿಸಿದೆ. ಹಿಂದೆ ಕುಳಿತಿದ್ದವರು ಅವಳಿಗೆ " ಆಗಿನಿಂದಲೂ ಕರೆಯುತ್ತಿದ್ದರೂ ಏಕೆ ಬರಲಿಲ್ಲ" ಎಂದಿದ್ದೇ ನನಗನ್ನಿಸಿತು , ಅವಳು ನೋಡುತ್ತಿದ್ದುದು ನನ್ನನ್ನಲ್ಲದೆ ನನ್ನ ಹಿಂದಿನ ಸೀಟಿನವರನೆಂದು ತಿಳಿಯಿತು. ತೆಗೆದ ಇಯರ್ ಫೋನ್ ಮತ್ತೆ ಕಿವಿಗೆ ಹಾಕಿದೆ. ಬಿಗ್ ಎಫ್ ಎಂ ಗೆ ಟ್ಯೂನ್ ಮಾಡಿದೆ. ಅದ್ರಲ್ಲಿ "ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ......" ಕೇಳಿ ಬರುತ್ತಿತ್ತು. ನಾನು ಮನಸಲ್ಲೇ ನಕ್ಕು ಕಣ್ಮುಚ್ಚಿ ಸೀಟಿಗೆ ಒರಗಿದೆ. ಹಾಗೆ ಸುಮ್ಮನೇ........

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ