ಬುಧವಾರ, ಮೇ 25, 2011

Chintu- ತುಂಟತನಕ್ಕೆ ಇನ್ನೊಂದು ಹೆಸರು

ಬೆಳಗಿನ ನಿದ್ದೆಯ ಮಂಪರು ಇನ್ನೂ ಕಳೆದಿರಲಿಲ್ಲ. "ಏ ಚಿಂಟು ಸುಮ್ನಿರು, ಹೊಡಿತೀನಿ ನೋಡು" ಎಂದು ಪಕ್ಕದ ಮನೆಯಿಂದ ಮಾತುಗಳು ಕೇಳಿಬಂದವು. ರಾತ್ರಿ ತಡವಾಗಿ ಬಂದಿದ್ದರಿಂದ ಅಮ್ಮ ನನ್ನನ್ನ ನಿದ್ದೆಯಿಂದ ಏಳಿಸಿರಲಿಲ್ಲ. ಅರ್ಜುನ್ (ನಾಲ್ಕು  ವರ್ಷದ ಪಕ್ಕದ ಮನೆಯ ಹುಡುಗ) ಬದಲು ಚಿಂಟು ಎಂದು ಕರೆದಿದ್ದು ಸ್ವಲ್ಪ ಆಶ್ಚರ್ಯವೆನಿಸಿತು. ಕಣ್ಣುಜ್ಜಿಕೊಂಡು ಹೊರಬಂದು ನೋಡಿದೆ. ಪಕ್ಕದ ಮನೆಯೊಳಗೆ ಒಂದು ಕೆಂದನೆಯ ನಾಯಿಮರಿ ಆಟವಾದುತಿತ್ತು. ಆಗ ಅವರು ಚಿಂಟು ಎಂದು ಕರೆದದ್ದು ನಾಯಿಮರಿಗೆ ಎಂದು ದೃಡವಾಯಿತು. 
ಚಿಂಟು ಬಂದು ಒಂದು ವಾರವೂ ಆಗಿರಲಿಲ್ಲ.ಅದನ್ನು ಕಟ್ಟಿಹಾಕಿರಲಿಲ್ಲವಾದ್ದರಿಂದ ಎಲ್ಲಂದರಲ್ಲಿ ಅಡ್ಡಾಡುತ್ತ ನಮ್ಮ ಮನೆಯಲ್ಲೂ ಊಟ ಮಡಿ ಹೋಗುತ್ತಿತ್ತು. ಆ ಮನೆಗೆ ಚಿಂಟು ಬರಲು ಒಂದು ಬಲವಾದ ಕಾರಣವೂ ಇತ್ತು. ಅದು ಕೊನೆಯ ಮನೆಯಾಗಿದ್ದು ಮನೆಯ ಕಂಪೌಂಡಿನ ಆಚೆ ಪೊದೆಗಳು ಬೆಳೆದು ಹಾವು ಹಲ್ಲಿಗಳು ವಾಸ ಮಾಡುವಂತಾಗಿತ್ತು. ವಾರದ ಹಿಂದೆ ಒಂದು ಹಾವು ಕೂಡ ಅವರ ಮನೆಯ ಮುಂದೆ ಹರಿದಾಡಿ ಭಯಬೀತರಾಗಿದ್ದರು. "ನಾಯಿ ಸಾಕಿ  ಹಾವು ಬಂದರೆ ಅದನ್ನು ಬೊಗಳಿ ಓಡಿಸುತ್ತೆ" ಎಂದು ಯಾರೋ ಸಲಹೆ ಕೊಟ್ಟರು. ಆಗ ಎಲ್ಲೋ ಓಡಾಡಿಕೊಂಡಿದ್ದ ಚಿಂಟುವನ್ನು ಹಿಡಿದು ತಂದು ಅದರ ಕಟ್ಟಿಗೆ ಪಟ್ಟಿ ಬಿಗಿದಿದ್ದರು. 
    ಚಿಂಟು ಯಾವಾಗಲು ಬಹಳ ತುಂಟತನ ಮಾಡುತ್ತಿತ್ತು.ಬಂದ ಒಂದೆರಡು ದಿನಗಳಲ್ಲೇ ಅವರು ಬೆಳೆಸಿದ್ದ ಮೆಣಸಿನಕಾಯಿಯ ಗಿಡಗಳು ಒಣಗಲು ಶುರುವಾದವು. ಇದು ಚಿಂಟುವಿನ ಕೆಲಸವೆಂದು ತಿಳಿಯಲು ಹೆಚ್ಹು ಸಮಯ ಹಿಡಿಯಲಿಲ್ಲ. ಆ ಗಿಡಗಳಿಗೆ ಹೊಗಿಬಂದಾಗಲೆಲ್ಲ ಉಚ್ಚೆ ಹುಯ್ದು ಒಣಗುವ ಹಂತ ತಲುಪಿಸಿತ್ತು.ಇನ್ನೂ ಅವರು ಪೂಜೆಗೆಂದು ಬೆಳೆಸಿದ್ದ ಹೂವಿನಗಿಡಗಳ ಕಥೆಯೇ ಬೇರೆ. ಹಿಂದಿನ ಜನ್ಮದಲ್ಲಿ ಅದಾರು ಅದು ಕೊಟ್ಟಿದ್ದ ಹೂವನ್ನು ತಿರಸ್ಕರಿಸಿದ್ದರೋ, ಈ ಜನ್ಮದಲ್ಲಿ ಸಿಕ್ಕ ಸಿಕ್ಕ ಹೂವಿನ ಗಿಡಗಳನ್ನು ಬಗ್ಗಿಸಿ ಕಿತ್ತು ಚಿದ್ರ ಚಿದ್ರ ಮಾಡುತಿತ್ತು. ಆ ಮನೆಯವರಿಗೆ ಪೂಜೆಗೆ ಹೂವಿಗೆಂದು ನಮ್ಮ ಮನೆಗೆ ಬರುವಂತಾಯಿತು.    ಸ್ವತಂತ್ರವಾಗಿ ಅಡ್ಡಾಡಿಕೊಂಡಿದ್ದ ಚಿಂಟು ಅಲ್ಲಿ ಇದ್ದ ಎಂಟೂ ಮನೆಗಳಿಗೆ ತನ್ನ ಬೇಟಿ ನೀಡುತ್ತಿತ್ತು.ಅಲ್ಲಿಯೂ ಅದೇ ದಾಂದಲೆ ನಡೆಸುತ್ತಿತ್ತು. ಅದಕ್ಕೆ ಪಕ್ಕದ ಮನೆಯವರು ಅದನ್ನು ಚೈನ್ ನಲ್ಲಿ ಮರಕ್ಕೆ ಕಟ್ಟಿಹಾಕಿದರು.ಹಾಕಿದ ಸ್ವಲ್ಪ ಹೊತ್ತಿಗೆ ಅದನ್ನು ಸುತ್ತು ಹೊಡೆದು ಕತ್ತು ಬಿಗಿದು ಸತ್ತ ಹಾಗೆ ಬಿದ್ದುಕೊಂಡಿತ್ತು . ಎಲ್ಲಿ ಸತ್ತೆ ಹೋಗುವುದೆಂಬ ಭಯದಲ್ಲಿ ಅದನ್ನು ಕಟ್ಟಿಹಾಕುತ್ತಲೇ ಇರಲಿಲ್ಲ. ಇದೆಲ್ಲವನ್ನು ಆ ಮನೆಯವರು ಕಷ್ಟಪಟ್ಟು ಸಹಿಸಿಕೊಂಡಿದ್ದರು. ಅದಕ್ಕೆ ಊಟ ಹಾಕುವುದನ್ನು ಕಡಿಮೆ ಮಾಡಿದರು.
       ಒಂದು ದಿನ ಇದ್ದಕ್ಕಿದ್ದಂತೆ ಅಕ್ಕ ಪಕ್ಕದ ಮನೆಗಳ ಚಪ್ಪಲಿಗಳ ಕಳ್ಳತನ ಶುರುವಾಯಿತು. ರಾತ್ರಿ ಬಿಟ್ಟಿದ್ದ ನಮ್ಮಮ್ಮನ ಚಪ್ಪಲಿಗಳು ಬೆಳಗಿನ ತನಕ ಮಾಯವಾಗಿತ್ತು. ಆದರೆ ಚಿಂಟು ಒಂದು ಚಪ್ಪಲಿ ಕಚ್ಚಿಕೊಂಡು ಹೋಗುವಾಗ ಸಿಕ್ಕಿಬಿತ್ತು. ಅಂದಿನಿಂದ ಎಲ್ಲರೂ ಚಪ್ಪಲಿಗಳನ್ನು ಕಿಟಕಿಯ ಮೇಲೆ ಅದರ ಕೈಗೆ ಸಿಗದಂತೆ ಇಡಲು ಪ್ರಾರಂಬಿಸಿದರು. ಪಕ್ಕದ ಮನೆಯವರಿಗಂತೂ ಹಾವಿಗಾಗಿ ಮುಂಗುಸಿಯನ್ನು ಸಾಕಿದಂತೆ ಆಗಿತ್ತು. 
          ಇಷ್ಟೆಲ್ಲಾ ತುಂಟತನ ಮಾಡುತ್ತಿದ್ದ ಚಿಂಟು ಮಾತ್ರ, ಅಷ್ಟೇ ತುಂಟನಾಗಿದ್ದ ಅವರ ಮನೆಯ ನಾಲ್ಕು ವರ್ಷದ ಅರ್ಜುನ್ ಕಿವಿ ಎಳೆದಾಡಿದರೂ , ಬಾಲ ಜಗ್ಗಿದರೂ ಸಹಿಸಿಕೊಂಡು ಒಳ್ಳೆ ಸ್ನೇಹಿತರಂತೆ  ಆಟವಾದುತ್ತಿದುದು ನೋಡಲು ನನಗೆ ಮುದ ನೀಡುತ್ತಿತ್ತು. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ