ಶುಕ್ರವಾರ, ಏಪ್ರಿಲ್ 2, 2010

ಹುಣಸೆಮರದ ದೆವ್ವಗಳು

ಅದೊಂದು ದೊಡ್ಡ ಹುಣಸೆಮರ. ಸೊಂಪಾಗಿ ಬೆಳೆದು ನಿಂತಿತ್ತು. ಆ ಮರದ ನೆಳಲು , ಅದರಲ್ಲಿನ ಹಕ್ಕಿಗಳ ಚಿಲಿಪಿಲಿ ಎಲ್ಲರಿಗೂ ಮುದ ನೀಡುತ್ತಿತ್ತು. ಆದರೆ ಅದೇ ಮರದ ಎದುರು ಮನೆಯ ವಿಶ್ವಸ್ ನ ಮನದಲ್ಲಿ ಭಯ ಹುಟ್ಟಿಸಿತ್ತು. ಅದಕ್ಕೆ ಕಾರಣ ಮೊನ್ನೆ ನಡೆದ ಘಟನೆ. ಗೆಳೆಯನ ಊರಿಗೆ ಹೋಗಿದ್ದ ವಿಶ್ವಸ್ ಹಬ್ಬದ ದಿನ ರಾತ್ರಿ ಮನೆಗೆ ಹಿಂತಿರುಗಿದ್ದ. ಮನೆಯ ಬಾಗಿಲು ಬೀಗ ಹಾಕಿತ್ತು. ಪಕ್ಕದ ಮನೆಯವರನ್ನು ವಿಚಾರಿಸಿದಾಗ ಅಪ್ಪ, ಅಮ್ಮ ಹತ್ತಿರದ ದೇವಸ್ತಾನಕ್ಕೆ ಹೋಗಿದ್ದರೆಂದು ತಿಳಿಯಿತು. ಅವರು ಬರುವವರೆಗೂ ಮನೆಯ ಎದುರಿನ ಹುಣಸೆಮರದ ಕೆಳಗೆ ಕಾಲ ಕಳೆಯಲು ನಿರ್ಧರಿಸಿ ಆ ಮರದ ಕೆಳಗೆ ಇರುವ ಆಸನದಲ್ಲಿ ಹಾಗೆ ಒರಗಿದ. ಪ್ರಯಾಣದ ಆಯಾಸಕ್ಕೋ ಏನೋ ಕಣ್ಣಿಗೆ ನಿದ್ರೆ ಹತ್ತಿಬಿಟ್ಟಿತು.


 ಸ್ವಲ್ಪ ಕಾಲ ಕಳೆಯುತ್ತಲೇ ಅವನಿಗೆ ಯಾರೋ ಕತ್ತು ಹಿಸುಕಿದಂತೆ ಅನುಭವವಾಗಿ ಉಸಿರಾಡಲು ಕಷ್ಟವಾಗತೊಡಗಿತು. ಕಣ್ಣು ಬಿಟ್ಟು ನೋಡಿದ. ಯಾರೂ ಇರಲಿಲ್ಲ. ಹೆದರಿಕೆಯಿಂದ ಮನೆಯ ಕಡೆಗೆ ಓದಿದ. ಮನೆಯ ಬೀಗ ತೆರೆದಿತ್ತು. ವಿಶ್ವಸ್ ನ ಅಪ್ಪ ಅಮ್ಮ ಅವನ ಮುಖದಲ್ಲಿದ್ದ ಗಾಬರಿಯನ್ನು ಗಮನಿಸಿದರೂ ಪ್ರಯಾಣದ ಆಯಾಸವೆಂದು ಸುಮ್ಮನಾಗಿದ್ದರು.


 ಬೆಳಗಾಗುವುದನ್ನೇ ವಿಶ್ವಸ್ ಎದುರು ನೋಡುತ್ತಿದ್ದ. ತನ್ನ ಆತ್ಮೀಯ ಗೆಳೆಯ ಸೈಂಟಿಸ್ಟ್ ಸೂರಿ ಜೊತೆ ಹಂಚಿಕೊಳ್ಳಲು ತನ್ನ ಸೈಕಲ್ ಹತ್ತಿ ಹೊರಟ. ಅವನ ಮನಸಿನಲ್ಲಿ ಅವನ ಅಜ್ಜಿಯ ಮಾತುಗಳು ಪ್ರತಿದ್ವನಿಸುತ್ತಿದ್ದವು. "ಹುಣಸೆಮರ ದೆವ್ವಗಳ ಆವಸಾಸ್ತನ. ಆಸೆ ಈಡೇರದ ವ್ಯಕ್ತಿಗಳು ಸತ್ತು ದೆವ್ವವಾಗುತ್ತಾರೆ,ಆ ದೆವ್ವಗಳು ಹುಣಸೆಮರದಲ್ಲಿ ಮನೆ ಮಾಡಿಕೊಳ್ಳುತ್ತವೆ. ತಮ್ಮ ಆಸೆಗಳನ್ನು ತಮ್ಮ ಹತ್ತಿರ ಬರುವ ವ್ಯಕ್ತಿಗಳ ಮುಖಾಂತರ ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತವೆ , ಇಲ್ಲವೇ ಅವರ ಕಟ್ಟು ಹಿಸುಕಿ ಸಾಯಿಸಲು ಹೇಸುವುದಿಲ್ಲ. ಅದಕ್ಕೆ ರಾತ್ರಿಯಲ್ಲಿ ಹುಣಸೆಮರದ ಹತ್ತಿರ ಸುಳಿಯಬಾರದು" ಅಜ್ಜಿಯ ಮಾತುಗಳು ಹಾಗೇ ಮನಸಿನಲ್ಲಿ ಸುಳಿದು ಹೋಯಿತು. ಯಾರೋ ವಿಶ್ವಾಸ್ ಎಂದು ಕೂಗಿದರು. ವಿಶ್ವಾಸ್ ಸೈಕಲ್ ನಿಲ್ಲಿಸಿದ. ಅಂಗಡಿಯ ಎದುರು ನಿಂತಿದ್ದ ಸೂರಿ ಅವನನ್ನು ನೋಡಿ ಕೂಗಿದ್ದ. ಇಬ್ಬರು ಸೂರಿಯ ಮನೆ ತಲುಪಿದರು. ವಿಶ್ವಾಸ್ ಹಿಂದಿನ ರಾತ್ರಿ ತನಗಾದ ಅನುಭವವನ್ನು ಸೂರಿಗೆ ಹೇಳುತ್ತಾ ತನ್ನ ಮನೆಯ ಎದುರಿರುವ ಹುಣಸೆಮರದಲ್ಲಿ ದೆವ್ವಗಳಿವೆ, ರಾತ್ರಿ ತನ್ನ ಕಟ್ಟು ಹಿಸುಕಿ ಸಾಯಿಸಲು ಪ್ರಯತ್ನಿಸಿ ತನಗೆ ಉಸಿರು ಕಟ್ಟಿದಂತಾಗಿ ಅಲ್ಲಿಂದ ಓಡಿಬಂದಿದ್ದನ್ನು ಹೇಳಿದ. ಇದನ್ನೆಲ್ಲಾ ಕೇಳಿ ಸೂರಿ ನಗಲು ಪ್ರಾರಂಬಿಸಿದ. ವಿಶ್ವಾಸ್ " ನಿನಗೇನಪ್ಪ ಕತ್ತು ಹಿಸುಕಿದ್ದು ನನಗೆ, ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ" ಎಂದ. ಅದಕ್ಕೆ ಸೂರಿ " ನೀನು ವಿಜ್ಞಾನದ ವಿದ್ಯಾರ್ಥಿಯೆಂದು ನನಗೆ ಅನುಮಾನ ಬರುತ್ತಿದೆ ! ಗಿಡಮರಗಳು , ಸಸ್ಯಗಳು ನಮ್ಮಂತೆಯೇ ಜೀವಿಗಳು. ಅವು ಹಗಲಿನಲ್ಲಿ ಇಂಗಾಲದ-ಆಕ್ಸೈಡ್ ಬಳಸಿಕೊಂಡು ಆಹಾರ ತಯಾರಿಸುತ್ತವೆ. ವಾತಾವರಣಕ್ಕೆ ಆಮ್ಲಜನಕ ಬಿಡುಗಡೆ ಮಾಡುತ್ತವೆ. ಅದೇ ರಾತ್ರಿಯಲ್ಲಿ ಅವು ಉಸಿರಾಡಲು ಅದೇ ಆಮ್ಲಜನಕ ಬಳಸಿಕೊಳ್ಳುತ್ತವೆ. ನಿನ್ನ ವಿಚಾರದಲ್ಲಿ ನಿನ್ನೆ ರಾತ್ರಿ ನೀನು ಆ ಹೆಮ್ಮರದ ಕೆಳಗೆ ಮಲಗಿದ್ದೆ. ಅದು ತನ್ನ ಸುತ್ತಲಿನ ವಾತಾವರಣದ ಆಮ್ಲಜನಕ ಬಳಸಿಕೊಳ್ಳುತ್ತಿತ್ತು. ಅದರ ಕೆಳಗೆ ಮಲಗಿದ್ದ ನಿನಗೆ ಆಮ್ಲಜನಕದ ಕೊರತೆ ಉಂಟಾಗಿ ನಿನಗೆ ಉಸಿರು ಕಟ್ಟಿದಂತಾಯಿತು. ಅಷ್ಟೇ " ಎಂದು ಸುಂದರವಾಗಿ ಸಮರ್ಥಿಸಿದ.


ವಿಶ್ವಾಸ್ ನ ತಲೆಯಲ್ಲಿ ಅಜ್ಜಿಯ ಮಾತುಗಳು ತುಂಬಿಕೊಂಡು ಇಷ್ಟೆಲ್ಲಾ ಆತಂಕಗಳಿಗೆ ಎಡೆಮಾಡಿತ್ತು. ಆದರೂ ಅಜ್ಜಿಯ ಹಿಂದಿನ ಉದ್ದೇಶ ರಾತ್ರಿ ಮರದ ಕೆಳಗೆ ಮಲಗಬರದೆನ್ನುವುದು ವಿಶ್ವಾಸ್ ನಿಗೆ ಮನದಟ್ಟಾಗಿತ್ತು. ಅವಳು ನಂಬಿದ್ದ ಮೂಡನಂಬಿಕೆ ಹಾಗು ವಿಜ್ಞಾನ ನಡುವೆ ಗೆರೆ ಎಳೆದು ತಿಳಿಯಲು ವಿಶ್ವಾಸ್ ಸಫಲನಾಗಿದ್ದ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ