ಭಾನುವಾರ, ಮೇ 9, 2010

ಗಿಡುಗ

ಕ್ಲಾಸ್ ಶುರುವಾಗಲು ಇನ್ನೂ ಐದು ನಿಮಿಷಗಳು ಬಾಕಿಯಿತ್ತು. ನಾನು ಆತುರಾತುರವಾಗಿ ಎರಡನೇ ಬೆಂಚಿನಲ್ಲಿ ಕುಳಿತೆ. ಬ್ಯಾಗ್ ಕಳಚಿ ಬೋರ್ಡ್ ಕಡೆಗೆ ನೋಡಿದೆ. "ಕಪ್ಪೆರಾಣಿ" ಎಂಬ ಶೀರ್ಷಿಕೆಯೊಂದಿಗೆ ಒಂದು ಕಪ್ಪೆ ಕೊಡೆ ಹಿಡಿದು ನಿಂತಿರುವ ಚಿತ್ರ ಸುಂದರವಾಗಿ ಬೋರ್ಡ್ನ ಮೇಲೆ ಚಿತ್ರಿತವಾಗಿತ್ತು. ಅದು ಕ್ಲಾಸಿನ ಶ್ವೇತಳನ್ನು ಅಣಕಿಸಲೆಂದೇ ಬಿಡಿಸಿದ ಚಿತ್ರ ಎಂದು ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ .


ಹೌದು, ಶ್ವೇತಾಳ ಬೀಗುತನ, ಡ್ರೆಸ್ ವೈಖರಿ , ಮಾತಿನ ಶೈಲಿ ಎಲ್ಲವೂ ಅವಳು ಹಿಂದಿನ ಜನ್ಮದಲ್ಲಿ ಕ್ವೀನ್ ಎಲಿಜಬೆಥ್ ಆಗಿದ್ದಳೆಂದು ಸಾರುತ್ತಿದ್ದವು. ಹುಡುಗರು ಅದಕ್ಕೆ ಅವಳ ಮುಖವನ್ನು ಕಪ್ಪೆಗೆ ಕಷ್ಟಪಟ್ಟು ಹೋಲಿಕೆ ಮಾಡಿ ಚಿರಪರಿಚಿತ ಮಾಡಿಬಿಟ್ಟಿದ್ದರು .


ಶ್ವೇತ ಕುಳಿತಲ್ಲೇ ಕೈ ಹಿಸುಕಿಕೊಳ್ಳತೊಡಗಿದಳು . ಅವಳ ಮುಖದಲ್ಲಿ ಅಸಹನೆ ಎದ್ದು ಕಾಣುತ್ತಿತ್ತು. ಕನ್ನಡದ ಪ್ರೊಫೆಸರ್ ಆಗಮಿಸಿದರು. ಅವರು ಸ್ಟೇಜ್ ಹತ್ತಿದ್ದೇ ಬೋರ್ಡ್ ನ ಮೇಲೆ ಬರೆದಿದ್ದ ಚಿತ್ರ ನೋಡಿ "ಯಾರ್ರಿ ಅದು ಎಂತಹ ಒಳ್ಳೆಯ ಕಲೆಗಾರರು ಚಿತ್ರ ತುಂಬಾ ಚೆನ್ನಾಗಿ ಬರೆದಿದ್ದೀರಾ" ಎಂದು ಅಳಿಸಲು ಡಸ್ಟರ್ ಕೈಗೆತ್ತ್ತಿಕೊಂಡರು . ಅವರ ಮಾತಿಗೆ ಶ್ವೇತ ಒಬ್ಬಳನ್ನು ಬಿಟ್ಟು ಎಲ್ಲರ ಮುಖದಲ್ಲೂ ನಗೆ ಇಣುಕಿತು. ಹೀಗೆ ಪ್ರತಿದಿನ "ಕಪ್ಪೆರಾಣಿ"ಯ ವಿವಿದ ಭಂಗಿಯ ಚಿತ್ರಗಳು ಬೋರ್ಡ್ ನ ಮೇಲೆ ಕಾಣಿಸಿಕೊಳ್ಳುವುದು, ಪ್ರೊಫೆಸರ್ ಗಳು ಅದನ್ನು ಹೊಗಳಿ ಅಳಿಸುವುದು ನಡೆದಿತ್ತು. ಇಂದಿಗೂ ನೆನಪಿದೆ ಕ್ಲಾಸ್ ಇನ್ನೂ ಪ್ರಾರಂಬವಾಗಿರಲಿಲ್ಲ, ಸ್ವಲ್ಪ ತಡವಾಗಿದ್ದರಿಂದ ಕೊನೆಯ ಎರಡನೇ ಬೆಂಚಿನಲ್ಲಿ ನನಗೆ ಜಾಗ ದೊರಕಿತು. ಆಗಲೇ ಹಿಂದಿನ ಬೆಂಚಿನಲ್ಲಿ ಕಪ್ಪೆಯ ಬಗ್ಗೆ ಗುಸುಗುಸು ಮಾತು ಸಾಗಿತ್ತು. ನಾನು ಬ್ಯಾಗಿನಿಂದ ಬುಕ್ ತೆಗೆಯುವಷ್ಟರಲ್ಲೇ ಹೋ ಎಂದು ಇಡೀ ತರಗತಿಯೇ ಕೂಗಿತ್ತು . ಶ್ವೇತಳ ಟೇಬಲ್ ಮೇಲೆ ಒಂದು ನಿಜವಾದ ಕಪ್ಪೆ ಕುಳಿತಿತ್ತು. ಹಿಂದಿನ ಬೆಂಚ್ನವರು ಕಪ್ಪೆ ತಂದು ಅವಳ ಕಡೆ ಎಸೆದಿದ್ದರು. ಅವಳು ಕೋಪಗೊಂಡು ತನ್ನ ಸಹಚರಣಿಯರ ಜೊತೆ ಕ್ಲಾಸಿನಿಂದ ಎದ್ದು ಹೋದಳು . ಪರಿಸ್ಥಿತಿ ಅರಿವಾಗುವುದರಲ್ಲೇ ಅವಳು ಪ್ರಿನ್ಸಿಪಾಲರ ಜೊತೆ ಕ್ಲಾಸಿನಲ್ಲಿ ಹಾಜರಾಗಿಬಿಟ್ಟಿದ್ದಳು . ಸ್ಟೇಜ್ ಮೇಲೆ ಪ್ರಿನ್ಸಿಪಾಲರು ಕಪ್ಪೆ ತಂದು ಎಸೆದವರಾರೆಂದು ಕೇಳಿದರು. ತರಗತಿ ಮೌನಕ್ಕೆ ಶರಣು ಹೋಗಿತ್ತು. ಅಸಹನೆಯಿಂದ ಪ್ರಿನ್ಸಿಪಾಲರು ಒಂದು ದಿನ ಕ್ಲಾಸ್ ಡಿಸ್ಮಿಸ್ ಮಾಡಿ ಈ ಕೃತ್ಯ ಎಸಗಿದವರು ಒಪ್ಪಿಕೊಂಡರೆ ಬಿಟ್ಟುಬಿಡುವುದಾಗಿ ದಮಕಿ ಹಾಕಿ ತೆರಳಿದರು. ಆ ಕಪ್ಪೆ ಮಾತ್ರ ತನಗೆ ಏನೂ ತಿಳಿಯದಂತೆ ಕ್ಲಾಸಿನ ಮೂಲೆ ಸೇರಿಕೊಂಡು ಪಿಳಿಪಿಳಿ ನೋಡುತ್ತಿತ್ತು .


ಒಂದು ದಿನ ಡಿಸ್ಮಿಸ್ ನ ನಂತರ ತರಗತಿ ಮತ್ತೆ ಪ್ರಾರಂಬವಾಯಿತು. ಶ್ವೇತ ನಾಲ್ಕು ದಿನ ಕಾಲೇಜಿಗೆ ತಲೆಹಾಕಲಿಲ್ಲ. ಐದನೇ ದಿನ ಕ್ಲಾಸಿಗೆ ಹಾಜರಾಗ ತೊಡಗಿದಳು. ಅವಳ ಎಂದಿನ ಬೀಗುತನ ಮಾಯವಾಗಿತ್ತು. ಕೆಲವು ದಿನದ ನಂತರ ಬೋರ್ಡ್ ಮೇಲೆ ಮತ್ತೊಂದು ಚಿತ್ರ.




ಒಂದು ಗಿಡುಗನ ಚಿತ್ರದ ಕೆಳಗೆ "ಸಾರಿ ಕಪ್ಪೆರಾಣಿ" ಇಂತಿ ಗಿಡುಗ ಎಂದು ಬರೆಯಲಾಗಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ